ಶುಕ್ರವಾರ, ಮಾರ್ಚ್ 10, 2017

ಇನ್ನು ನೀನ್ಯಾರೋ ಮತ್ತೆ ನಾನ್ಯಾರೋ....

ಕಳೆದ ಕನಸುಗಳ ಕಲ್ಮಷವ ತೊಳೆದು ಹರಿಯುತಿಹೆ
ಉಳಿದ ನನಸುಗಳ ಚಿತ್ತಾರವ ಹೆಣೆದು ಸುರಿಯುತಿಹೆ
ಕಲ್ಪನೆಯಲಿ ಮತ್ತೆ  ಕಾಡದಿರಿ ಹಳೆ ನೋವ ಮೊಗವೇ
ಅಲ್ಪವಾದರೂ ಸರಿಯೇ ಸರಿಯದಿರಿ ಹೊಸತು ನಗುವೇ
ಇನ್ನು ನೀನ್ಯಾರೋ ಮತ್ತೆ ನಾನ್ಯಾರೋ....

ಮೂಡಣದಿ ರವಿಕಿರಣ ಹಿಂದಿಗಿಂತಲೂ ವಿಸ್ಮಯ

ಸಂಜೆಯಾಗಸವು ಎಂದಿಗಿಂತಲೂ ರಮಣೀಯ
ಯಾರ ವೈಯಾರದ ದಿಬ್ಬಣಕೆ ಹೊರಟಿಹುದು 
ಯಾರ ಮನಸೊಳಗೆ ನವ ಪ್ರೀತಿ ಹುಡುಕಿಹುದು 
ಸ್ವಲ್ಪವಾದರೂ ಸರಿಯೇ ಸರಿಯದಿರಿ ನಸು ನಗುವೇ 
ಇನ್ನು ನೀನ್ಯಾರೋ ಮತ್ತೆ ನಾನ್ಯಾರೋ....

ಅನವರತ ಹುಡುಕಿ ಸೋತಿಹೆನು ಪ್ರೇಮವನು 

ನೆಮ್ಮದಿಯ ಬಯಸಿ ಮರೆತಿಹೆನು ಎಲ್ಲವನು 
ಯಾರ ಹೃದಯದಲಿ ಮರುಜೀವ ಪಡೆಯುವುದು 
ಯಾರ ಉಸಿರಿನಲಿ ಹಸಿರಾಗಿ ಉಳಿಯುವುದು 
ಕಲ್ಪನೆಯಾದರೂ ಸರಿಯೇ ಸರಿಯದಿರಿ ಹುಸಿ ನಗುವೇ 
ಇನ್ನು ನೀನ್ಯಾರೋ ಮತ್ತೆ ನಾನ್ಯಾರೋ....

ಬೆಂಬಿಡದು ಹಳೆಯ ನೋವುಗಳ ಸರಮಾಲೆ 

ನಂಬಿಕೆಯೇ  ಬದುಕು ಇರಬಹುದು  ದೈವಲೀಲೆ 
ಯಾರ ಮಡಿಲೊಳಗೆ  ಮಗುವಾಗಿ ಹರಿಯುವುದು 
ಯಾರ ಕನಸಲಿ ಮತ್ತೆ ಹೊಸ ಜನ್ಮ ತಾಳುವುದು 
ಶಿಲ್ಪವಾದರೂ ಸರಿಯೇ ಸರಿಯದಿರಿ ಹಸಿ ನಗುವೇ 
ಇನ್ನು ನೀನ್ಯಾರೋ ಮತ್ತೆ ನಾನ್ಯಾರೋ....

ಸೋಮವಾರ, ಏಪ್ರಿಲ್ 6, 2015

ನನ್ನೊಲುಮೆಯ ಸವಿಯೆ ಬಳಿಬಾರೆಯ?

ಕಳೆದಿರುಳ ಕಾರ್ಮೋಡ ಸರಿದಿಂದು ಮುಂಗಾರು
ಮೆಲ್ಲನೆ ಸುರಿಯುತಿಹ ಸೋನೆಮಳೆಯೆ
ಇರದಿರುವ ಬೀಗುಮಾನ ಸರಿದಿಂದು ಮುಂಗುರುಳು
ಮೆಲ್ಲನೆ ಹರಿಯುತಿಹ ರಜನಿಸಿರಿಯೆ
ಬಲುಮರೆತ ಉಯ್ಯಾಲೆ ತೂಗಿ ನಲಿಯುತಿದೆ
ಬಹುದಿನದ ಕನಸುಗಳು ತಾಕಿ ಹೊರಳುತಿದೆ
ನನ್ನೊಲುಮೆಯ ಸವಿಯೆ ಬಳಿಬಾರೆಯ?

                           ಸುಖ ದುಃಖಗಳೇಕೋ ಸೂತಕದ ಎದೆಯೊಳಗೆ

                           ಮನದೊಳಗೊಂದು ಅನರ್ಥ ಚಿತ್ರಪಟ
                           ಅನವರತ ನೆನೆಯುತಿದೆ ನಿನ್ನ ಭಾವಬನದೊಳಗೆ
                           ಕಾಗದದೊಳಗೊಂದು ವಿಚಿತ್ರ ನೋವಪುಟ
                           ಪುಟಿಪುಟಿದು ಪುಡಿಯಾದ ಜೀವವು ಕೊರಗುತಿದೆ
                           ತಡವರಿಸಿ ತಡವಾದ ಶಬ್ದಗಳು ನರಳುತಿದೆ
                           ನನ್ನೊಲುಮೆಯ ಸವಿಯೆ ಬಳಿಬಾರೆಯ?

ವಿರಕ್ತ ಅನುರುಕ್ತ ಮತ್ತೆ  ನಿರುಪಯುಕ್ತ ಪದದೊಳಗೆ
ಮಂಪಿರಿದು ನಿದ್ರಿಸಿದ ಪ್ರೇಮದರಸದೂಟ
ನೋವಕಾವಿನಲಿ ಕಾವಿಯುಟ್ಟು ಮೈಮನದೊಳಗೆ
ಕಂಪಿಸಿದ ಚಂದ್ರನಲಿ ಮೋಹಪಾಶಗಳಾಟ
ಭ್ರಮೆಭ್ರಹ್ಮ ಸೃಷ್ಠಿಸಿದ ಜೀವನವು ಮುಗಿಯುತಿದೆ
ವಚನಗಳ ವಂಚನೆಯ ಚಕ್ರವು ಸವಿಯುತಿದೆ
ನನ್ನೊಲುಮೆಯ ಸವಿಯೇ ಬಳಿಬಾರೆಯ?

                          ತುಂಡು ಮಡಕೆಯ ಚೂರು ತೂತಾದರೇನಂತೆ

                          ತಂಪು ದಳಗಳ ಚಿಗುರು ಒಣಗಿದರೇನಂತೆ
                          ತಲ್ಲಣಿಸಿ ತಬ್ಬಲಿಯು ಜೋರು ಅತ್ತುಕೊರಗಿದರೇನಂತೆ
                          ತಾಪವರಿಯದ ತಿಮಿರ ಸೂರು ಜಾರಿದರೇನಂತೆ
                          ತುಂಬೆಯ ಹೂವು ಪೂಜೆಗೆ ನಿಲುಕುವುದೆ
                          ತಂಬೆಲರ ಕೊರಗು ನಿನಗೆ ತಿಳಿಯುವುದೆ
                          ತನ್ನೊಡಲ ಕನಸೇ ಬಳಿಬಾರೆಯ?
                         

ಶುಕ್ರವಾರ, ಜನವರಿ 24, 2014

ಬಾರದಿರು ನನ್ನೊಂದಿಗೆ

ನೀ ಬಾರದಿರು ಮತ್ತೆ ನನ್ನೊಂದಿಗೆ
ನೋವ ಕಾವಿನಲಿ ನರಳಿಹ ಜೀವಕೆ
ಕಾದು ಕೊರಗಿ ಮರುಗಿರುವ ಹೃದಯಕೆ 
ಬಳಲಿ ಒಣಗಿಹ ಬಸವಳಿದ ದೇಹಕೆ
ನೀ ಬಾರದಿರು ಮತ್ತೆ ನನ್ನೊಂದಿಗೆ

ತಿಳಿ ಸಂಜೆಯಲಿ ನಕ್ಕು ಮುಳುಗುವ ರವಿಯಂತೆ 
ಇರುಳ ಕಡಲೊಳು ಭ್ರಮೆಯ ನಿಶಾಚರಿಯು ನೀನು 
ಕವಲು ದಾರಿಯ ನಡುವೆ ಸಿಲುಕುವ ನಡೆಯಂತೆ
ಮರುಳ ನೋಟದೊಳು ಕನಸ ವ್ಯಾಪಾರಿಯು ನೀನು
ಬಾರದಿರು ರವಿಯ ದಾರಿಯಲಿ
ಸುಳಿಯದಿರು ನಿಶೆಯ ನಡೆಯಲಿ

ಮನಸ್ಸು ಮೈ ನಿನ್ನದೆನ್ನುವ ವಚನಗಳಂತೆ
ಮುರಿದು ಮಾರುವ ಮನಸ್ಸಿನ ಅರವಳಿಕೆಯು ನೀನು
ತನುವು ಪರರಿಗೆ ಮನವು ಕರಗಿದೆಯಂತೆ
ಸೆಳೆವ ಸುಳಿಯ ಸರಸಕೆ ನರಳಿಕೆಯು ನೀನು
ಬಾರದಿರು ವಚನ ನರಳುವಲಿ
ಸುಳಿಯದಿರು ಮುರಿದ ಮನಗಳಲಿ

ಚಂದ್ರಮೊಗದೊಳು ಕಣ್ಣೀರ ಹನಿಹನಿಯು ಕಲೆಯಂತೆ
ಸನಿಹದಲಿ ನಕ್ಕು ನಲಿಯುತಿಹ ನಕ್ಷತ್ರವು ನೀನು
ಧರೆಯ ಮುಗಿಲಲಿ ನೆನಪಾಗಿ ಮಲಗಿಹೆಯಂತೆ
ನೆಪದ ಬಯಲಿನ ಭಾವಗಳ ವಿಚಿತ್ರವು ನೀನು
ಬಾರದಿರು ಕನಸ ಕಲೆಯಲಿ
ಸುಳಿಯದಿರು ಮುಗಿಲ ನೆರಳಲಿ

                              - ಅಚಲ 

ಮಂಗಳವಾರ, ಡಿಸೆಂಬರ್ 24, 2013

ಶಿವರುದ್ರಪ್ಪರವರಿಗೆ ನುಡಿ ನಮನ

ಕಾಣದ ಕಡಲಿನ ಸಾಮಗಾನದೊಳು
ಕೊಂಚ ಚೆಲುವನು ಕೊಂಚ ಒಲವನು
ಬಿತ್ತಿ ಬತ್ತದೆ ಉಳಿದ ದೀಪವ ಹಚ್ಚಿ
ಜೋಗುಳದ ಮೊರೆತದಲಿ ಬೆರೆತ ರಸಋಷಿ ಕವಿಯೆ
ನಿಮಗಿದೋ ಅನಂತ ನಮನ

ದೇವಶಿಲ್ಪಿಯ ತೆರೆದ ಬಾಗಿಲೊಳು
ಗೋಡೆಯ ಹಣೆಯಲಿ ತೀರ್ಥವಾಣಿಯನು
ಮೆತ್ತಿ ಮುತ್ತಿದ ಅಳಿದ ನೆನಪ ಚುಚ್ಚಿ
ಹಸಿರ ತೇರಿನಲಿ ಬೆರೆತ ರಸಋಷಿ ಕವಿಯೆ
ನಿಮಗಿದೋ ಅನಂತ ನಮನ

ಮೋಡದ ನೆತ್ತಿಯ ಆವರಣದೊಳು
ಅನಾವರಣವಾದ ಕಾಡಿನ ಕತ್ತಲನು
ಚೆಲ್ಲುವ ನಾಲ್ಕು ಹನಿಯ ಮೆಚ್ಚಿ
ಮುರಿದ ನೋವಿನಲಿ ಬೆರೆತ ರಸಋಷಿ ಕವಿಯೆ
ನಿಮಗಿದೋ ಅನಂತ ನಮನ

ವ್ಯಕ್ತಮಧ್ಯದ ತಿರುಗುವ ಚಕ್ರಗತಿಯೊಳು
ಪ್ರೀತಿ ಇಲ್ಲದ ಕಾರ್ತಿಕ ಮಾಸವನು
ಕಣ್ಣೀರ ಕಡಲ ಭಾವದಲಿ ನೆಚ್ಚಿ
ಭವ ಬಂಧನ ಭ್ರಮೆಯಲಿ ಬೆರೆತ ರಸಋಷಿ ಕವಿಯೆ
ನಿಮಗಿದೋ ಅನಂತ ನಮನ


ನನ್ನೊಡಲಲಿ ಹಣತೆಯ ಸಾಲನ್ನು ಕಟ್ಟಿಟ್ಟು
ನಿಮ್ಮ ಮೊಗವನು ಕಾಣದ ಋಣಭಾರವ ಇಟ್ಟು
ಶಿವ ಶಾಂತಿ ರುದ್ರ ಕಾಂತಿಯ ಶಿವರುದ್ರಪ್ಪರಾಗಿ
ನನ್ನ ಮನದಲಿ ಮೆರೆದು ಬೆರೆತ ರಸಋಷಿ ಕವಿಯೆ
ನಿಮಗಿದೋ ಅನಂತ ನಮನ

                                                                       - ಅಚಲ

ಶನಿವಾರ, ಆಗಸ್ಟ್ 10, 2013

ಆಗುವುದಾದರೆ ಆಗಿಬಿಡು

ನಿನ್ನ ನೈದಿಲೆಯ ಮೈಯ ಬೆವರಾಗ ಬಯಸುವುದಿಲ್ಲ
ಕಾರಣ ನೀನು ನನ್ನ ಒರೆಸಿಬಿಡುತ್ತೀಯ
ನಿನ್ನ ಸರೋವರದ ನಯನದಲಿ ಕಂಬನಿಯಾಗ ಬಯಸುವುದಿಲ್ಲ
ಕಾರಣ ನೀನು ನನ್ನ ಅಳಿಸಿಬಿಡುತ್ತೀಯ
ಆಗುವುದಾದರೆ ಆಗುತ್ತೇನೆ ನಿನ್ನೆದೆಯ ಬಡಿತ
ಕಾರಣ ನೀನು ನನ್ನ ಉಳಿಸಿಬಿಡುತ್ತೀಯ.....!!!!

ನಿನ್ನ ನೀಳ ಕೇಶರಾಶಿಯಲಿ ಕೂದಲಾಗ ಬಯಸುವುದಿಲ್ಲ
ಕಾರಣ ಬಿಳಿ ಕೂದಲೆಂದು ನನ್ನ ತೆಗೆದುಬಿಡುತ್ತೀಯ
ನಿನ್ನ ಜೇನ ತುಟಿಯಲ್ಲಿ ಬಣ್ಣವಾಗ ಬಯಸುವುದಿಲ್ಲ
ಕಾರಣ ಸಂಜೆಯಲಿ ನನ್ನ ತೊಳೆದುಬಿಡುತ್ತೀಯ
ಆಗುವುದಾದರೆ ಆಗುತ್ತೇನೆ ನಿನ್ನೊಡಲ ಉಸಿರು
ಕಾರಣ ನೀನು ನನ್ನ ಹಿಡಿದಿಡುತ್ತೀಯ......!!!!

ನಿನ್ನ ನುಣುಪಾದ ಕಾಲಿನಲಿ ಗೆಜ್ಜೆಯಾಗ ಬಯಸುವುದಿಲ್ಲ
ಕಾರಣ ನನ್ನ ಬದಲಾಯಿಸಿಬಿಡುತ್ತೀಯ
ನಿನ್ನ ಸ್ನಾನದ ನೀರಿನಲಿ ಇಣುಕಲು ಬಯಸುವುದಿಲ್ಲ
ಕಾರಣ ನನ್ನ ಚೆಲ್ಲಿಬಿಡುತ್ತೀಯ
ಆಗುವುದಾದರೆ ಆಗುತ್ತೇನೆ ನಿನ್ನ ಹಣೆಗೆ ತಿಲಕ
ಕಾರಣ ಮರೆಯದೆ ನನ್ನ ಇಟ್ಟುಬಿಡುತ್ತೀಯಾ.....!!!!

ನನ್ನ ದೇಹ ನಿನ್ನದು ನನ್ನೊಡಲ ಉಸಿರು ನಿನ್ನದು
ನನ್ನ ಹೃದಯ ನಿನ್ನದು ನನ್ನೆದೆಯ ಮಿಡಿತ ನಿನ್ನದು
ನನ್ನ ಪ್ರೀತಿ ನಿನ್ನದು ನನ್ನ ಕನಸಿನ ಸೆಳೆತ ನಿನ್ನದು
ನನ್ನ ಹೆಸರು ನಿನ್ನದು ನನ್ನ ಬಾಳ ನೌಕೆ ನಿನ್ನದು
ಆಗುವುದಾದರೆ ಆಗಿಬಿಡು ನನ್ನ ಜೀವನಾಡಿ
ನನ್ನ ಜೀವವನು ಕೊನೆವರೆಗೂ ಬಿಟ್ಟುಕೊಡುತ್ತೀನಿ ..... 


                                                           - ಅಚಲ 




ಗುರುವಾರ, ಮೇ 30, 2013

ನಾನಿಲ್ಲ

ಕತ್ತಲೆಯ ಸುತ್ತಲಲಿ ಮಲಗಿ ತಿಮಿರದಲಿ 
ಸೋತು ಜೋತಾಡಿದ ಕನಸಿನಲಿ ನಾನಿಲ್ಲ
ಕಟ್ಟಿಗೆಯ ಅಟ್ಟದಲಿ ಸುಟ್ಟ ಜ್ವಾಲೆಯಲಿ
ಇಟ್ಟು ಉರಿಸಿದ ನೆನೆಪಿನಲಿ ನಾನಿಲ್ಲ
ನಾನಿಲ್ಲ ನೀನಿರದೆ ಬೆಳಕ ಬೀರುವಲಿ
ಅರುಣನ ಕಿರಣ ಇಣುಕುವಲಿ ನಾನಿಲ್ಲ 

ಹೆಜ್ಜೆಯಲಿ ಗೆಜ್ಜೆಗಳ ಸವರಿ ನಿನಾದದಲಿ
ಕಾಲದ ನಡಿಗೆಯ ನುಡಿಯಲ್ಲಿ ನಾನಿಲ್ಲ
ಆಡಿ ಅಡಿಗಿಟ್ಟ ಆಟಿಕೆಯ ನೆರಳಿನಲಿ
ಬೆರೆತು ಮರೆತಿಹ ಮರೆಯಲ್ಲಿ ನಾನಿಲ್ಲ
ನಾನಿಲ್ಲ ನೀನಿರದೆ ಹುಸಿನಗೆಯ ತೋರುವಲಿ
ಆಟಗಳ ಮಾಟದ ನೋಟದಲಿ ನಾನಿಲ್ಲ

ಚುಕ್ಕಿಯ ಪಕ್ಕದಲಿ ಎಳೆದ ರಂಗೋಲಿಯಲಿ
ರಂಗಾದ ಗುಂಗಿನ ಸಂಗದಲಿ ನಾನಿಲ್ಲ
ಮಿಂಚಿನ ಮಂಚದಲಿ ಬರೆದ ಅಂಚೆಯಲಿ
ಮಿಡಿದ ಚಡಪಡಿಕೆಯ ಪದದಲ್ಲಿ ನಾನಿಲ್ಲ
ನಾನಿಲ್ಲ ನೀನಿರದೆ ಹೊಸ ಪ್ರೀತಿ ಅರಳುವಲಿ
ನವವಧುವ ನಗುವಿನ ನಲಿವಿನಲಿ ನಾನಿಲ್ಲ

ಪಚ್ಚೆ ಹಚ್ಚೆಯ ಹೊದ್ದ ಜರಿತಾರಿ ಸೀರೆಯಲಿ
ನೀರವ ಮಡಿಕೆಯ ಸೆರಗಿನಲಿ  ನಾನಿಲ್ಲ
ನಯವಾದ ನಯನದ ಕಾಡಿಗೆಯ ಸಂಧಿಯಲಿ
ಇಳಿದು ಸುಳಿಯುವ ಕಣ್ಣೀರಿನಲಿ ನಾನಿಲ್ಲ
ನಾನಿಲ್ಲ ನೀನಿರದೆ ಅಂದದ ಪಲ್ಲಕ್ಕಿಯಲಿ
ನೀ ಇಳಿದ ಕ್ಷಣದೊಳಗೆ ಉಸಿರಿನಲಿ ನಾನಿಲ್ಲ 

                                                   - ಅಚಲ 

ಮಂಗಳವಾರ, ಮೇ 7, 2013

ಏಕೆ ಕಾಡುವೆ ಸುಮ್ಮನೆ....

ಏಕೆ ಕಾಡುವೆ ಸುಮ್ಮನೆ....
ಇಂದು ನೆನ್ನೆಯದಲ್ಲ ನಾಳೆಯ ತಿಳಿದಿಲ್ಲ
ತಿಳಿ ಹಗಲಿನ ಬೆಳಕಿಗೆ ಹೆಗಲನ್ನು ನೀಡಿಲ್ಲ
ಹೆಗ್ಗುರುತು ಬಿಡಿಸಿಲ್ಲ ಜೀವ ದಡ ಬದುಕಿಲ್ಲ
ನಡೆವ ದಾರಿಯ ತುಂಬ ಹೂವನ್ನು ಹಾಸಿಲ್ಲ
ಕಾಣದ ಒಲುಮೆಗೆ ಇನ್ನೂ ಕಾದಿಹೆನಲ್ಲ 
ಏಕೆ ಕಾಡುವೆ ಸುಮ್ಮನೆ..... 

ಏಕೆ ಕಾಡುವೆ ಸುಮ್ಮನೆ....
ಎದೆಯ ತೋಟದಲೆಲ್ಲು ಬಳ್ಳಿಗಳ ಸೆರೆಯಿಲ್ಲ
ಸೆಲೆಯಿಲ್ಲ ನದಿಯಲ್ಲಿ ಸಿಹಿ ನೀರ ಝರಿಯಿಲ್ಲ
ನೇರ ಪದವಿಲ್ಲ ಬರೇ ನೀರವ ಮೌನ ತುಂಬೆಲ್ಲ
ತಬ್ಬಿದ ಮೌನದಲು ಮಾತು ನಿನ್ನದೇ ಬೇರಿಲ್ಲ
ಬೇರಿರದ ಮರದಲ್ಲಿ ಅವಿತು ಕುಳಿತಿಹೆನಲ್ಲ
ಏಕೆ ಕಾಡುವೆ ಸುಮ್ಮನೆ...... 

ಏಕೆ ಕಾಡುವೆ ಸುಮ್ಮನೆ....
ಕಾಡುವ ಕಣ್ಣಿನಲಿ ಸುರಿದ ತುಸು ಕಂಬನಿಯಿಲ್ಲ
ಕಂಬಗಳ ಬಿಂಬದಲಿ ತೋರಿದ ಸಂಭ್ರಮವಿಲ್ಲ
ಸಂಜೆಯಾ ಸಂತೆಯಲಿ ಹರಿದ ಸಂಗತಿಯಿಲ್ಲ
ಸಂಗಾತಿ ಬಳಿಯಿಲ್ಲ ಬಿಳಿಯ ಮಲ್ಲಿಗೆಯಿಲ್ಲ
ಮೆಲ್ಲಗೆ ಚಳಿಯಲ್ಲು ಅತ್ತು ಬೆವೆತಿಹೆನಲ್ಲ
ಏಕೆ ಕಾಡುವೆ ಸುಮ್ಮನೆ..... 

ಏಕೆ ಕಾಡುವೆ ಸುಮ್ಮನೆ....
ತೋರಣದ ತೀರದಲು ತೂಗುವ ತಳಿರಿಲ್ಲ
ತಾಗುವ ನೋವಿನಲಿ ಸಾರುವ ಪದವಿಲ್ಲ
ಪದಕದಾ ಭೇಟೆಯಲಿ ಬಾಣ ಬಿರುಸುಗಳಿಲ್ಲ
ಬಿರು ಮಳೆಯ ಗಡಿಯಲ್ಲಿ ಪ್ರೀತಿಯಾ ಗುಡಿಯಿಲ್ಲ
ಗುಡುಗಿನ ಭಯದಲ್ಲು ನಿನ್ನ ಹುಡುಕಿಹೆನಲ್ಲ
ಏಕೆ ಕಾಡುವೆ ಸುಮ್ಮನೆ...... 

                                           - ಅಚಲ 

ಗುರುವಾರ, ಏಪ್ರಿಲ್ 11, 2013

ಯುಗಾದಿ.....

ತರುಲತೆಗಳ ನಾಕದಲ್ಲಿ ಸಪ್ತ ಸುಮದ ಲೋಕದಲ್ಲಿ
ಜೇನ ಸಿಹಿಯ ಪಾಕದಲ್ಲಿ ಮರೆತ ನೋವ ಪದಗಳಲ್ಲಿ
ಅರಗಿಣಿಗಳ ಗಾನದಲ್ಲಿ ಅರಳಿ ಬಂತು ಯುಗಾದಿ
ಬೇವು ಬೆಲ್ಲ ತ್ಯಾಗದಿ... 

ಪ್ರೀತಿಯು ಅರಳಿ ಮರೆತು ತೆರಳಿ ಅಂಧಕಾರ ಬೇವಿಗೆ
ಪ್ರೇಮ ಹೊರಳಿ ಕಲೆತು ಮರಳಿ ಬೆಲ್ಲ ಸವಿಯು ಮೆಲ್ಲಗೆ 
ತ್ಯಾಗ ಅಮರ ಒಲವು ಭ್ರಮರ ಮರಳಿ ಬಂತು ಯುಗಾದಿ
ಸಿಹಿ ಕಹಿಯ ಸ್ನೇಹದಿ.... 

ನೀನು ಯಾರೋ ನಾನು ಯಾರೋ ಉಸಿರ ತುಂಬಿ ಪ್ರೀತಿಗೆ
ಒಲವು ಯಾರೋ ತ್ಯಾಗ ಯಾರೋ ಮರೆತ ಮಾತು ಸುಮ್ಮಗೆ
ಸವಿಯು ನೀನು ನೆರಳು ನಾನು ಹೊರಳಿ ಬಂತು ಯುಗಾದಿ
ನೋವು ನಲಿವ ಲೋಕದಿ... 

ನಿನ್ನ ಸನಿಹ ಬೆಲ್ಲ ವಿರಹ ಬೇವು ಸಮಾಗಮವೇ ಜೀವನ 
ಒಲವು ಗೆಲುವು ಮರೆವು ನೋವು ಜೀವ ಮರಣ ಸಿಂಚನ
ಪುನಃ ಸೇರು ಪ್ರೇಮ ಬೀರು ಹೊಸತು ಬಂಧ ಯುಗಾದಿ 
ನೀನೆ ಎಲ್ಲ ಪ್ರೇಮದಿ.... 

                                                 - ಅಚಲ 

ಶನಿವಾರ, ಮಾರ್ಚ್ 23, 2013

ನಿನ್ನೆಡೆಗೆ

ಎಲ್ಲೋ ಜಾರಿದೆ ಮನಸು ನಿನ್ನೆಡೆಗೆ
ಯಾಕೋ ಮಿಡಿದಿದೆ ಹೃದಯ ಒಳಗೊಳಗೆ 
ಎನ್ನ ಜೀವನದ ಹಣತೆ ಆರುವಾಗ
ಹೇಗೋ ಅಲೆದಿದೆ ಉಸಿರು ಹಾಗೆ ಸುಮ್ಮಗೆ 

ಸುತ್ತ ಸತ್ತ ಕತ್ತಲಿನ ನೆತ್ತರಲಿ ಅತ್ತ ಕಣ್ಣೀರು 
ಕೊಟ್ಟು ಸುಟ್ಟ ಭರವಸೆಯ ಮಾತಿನಲಿ ನೆಟ್ಟ ನಿಟ್ಟುಸಿರು
ಎತ್ತಣ ಪ್ರೀತಿ ಎಲ್ಲಿಯ ಒಲವು ಬರಿದೇ ನೋವು
ಜಗ್ಗಿ ತಗ್ಗಿದ ಮನದ ಭಾವದಲಿ ಸುಗ್ಗಿ ನಿನ್ನ ಹೆಸರು

ಮುಚ್ಚಿ ಬಿಚ್ಚಿದ ಪ್ರೇಮ ಓಲೆಯಲಿ ಹಚ್ಚಿ ದಳ್ಳುರಿಯು 
ಹತ್ತಿ ಸುತ್ತಿದ ಪ್ರಣಯ ಬನಗಳಲಿ ಮುತ್ತಿದಾ ಬಲೆಯು
ಬತ್ತುವ ಪ್ರೀತಿ ಜಾರುವ ಒಲವು ಕಾದಿದೆ ಸಾವು
ಇಳಿ ಮಳೆಯ ಮರುಕ ಹನಿಯಲಿ ಸುಳಿ ನಿನ್ನ ಹೆಸರು

ತೂಗಿ ಬಾಗಿ ಮಣಿದ ತ್ಯಾಗದಲಿ ಸಾಗಿ ಬಾರದೆ
ತುತ್ತು ಮುತ್ತಿನ ಶಕುನ ಹಕ್ಕಿಯ ಹೊತ್ತು ತಾರದೆ
ಶೋಕವು ಪ್ರೀತಿ ಮೂಕವು ಒಲವು ಮೌನವು ನಾವು
ಕುಂಚ ಅಂಚಿನ ಬಣ್ಣ ಕರಗುವಲಿ ಪ್ರಪಂಚ ನಿನ್ನ ಹೆಸರು

                                             - ಅಚಲ